ಗುರುವಾರ, ಜುಲೈ 21, 2011

ತರ ತರ'ಭೀತಿ'


ಟ್ರೈನಿಂಗ್ ಎಂದಾಕ್ಷಣ, ಕುತೂಹಲ, ನಿರೀಕ್ಷೆ,…..ಆದರೆ ಅದೇನೂ ಇರಲಿಲ್ಲ. ಈ ಸಾರಿ ಮೊದಲನೇ ಟ್ರೀನಿಂಗ್ ಆದರೂ ಒಂದು ರೀತಿಯ ಉತ್ಸಾಹವಿರಲಿಲ್ಲ. ಡಿಪಾರ್ಟ್ ಮೆಂಟ್ ನ ದಿಗ್ದರ್ಶನ ಅದಾಗಲೇ ಆಗಿತ್ತು. ಅಂತೆಯೇ ಟ್ರೈನ್ ಹತ್ತಿದೆವು. ಶಶಿ, ತಮ್ಮಯ್ಯ ಮೈಸೂರಿನಿಂದ ಹೊರಟ್ರು. ನಾನು ಕೆ.ಆರ್ ನಗರದಲ್ಲಿ ಹತ್ತಿದೆ. ಜುಲೈ 30ರ ಸಂಜೆ. ಅರಸೀಕೆರೆ ತಲುಪಿ ಅಲ್ಲಿ ತಂಗಿ, ಬೆಳಿಗ್ಗೆ ಜನಶತಾಬ್ದಿ ಹತ್ತಿದೆವು. ಮಧ್ಯಾಹ್ನ ಹುಬ್ಬಳ್ಳಿ. ಅಲ್ಲಿಂದ ಧಾರವಾಡದ ಬಸ್ಸು. ಅದು ಮೊದಲ ಧಾರವಾಡ ಭೇಟಿ. ನೋಡ ನೋಡುತ್ತಿದ್ದಂತೆ ಆ ಜನ, ಖಡಕ್ ಮಾತು ದಾರಿಯಲ್ಲೇ ಪರಿಚಯವಾಯ್ತು. ಕೊಳಕೂ ಕೂಡ. . ಬಹಳ ವರ್ಷ ಕಳೆದ ಮೇಲೆ ಒಬ್ಬ ಒಳ್ಳೆಯ ಮೋಡಿಗಾರ, ಮಾತುಗಾರನನ್ನು ನೋಡಿದೆ. ಜೊತೆ ಜೊತೆಯಾಗಿ ಫೋಟೋ ತೆಗೆಸಿಕೊಂಡೆ. ಖುಷಿಯಿಂದ ಹಿರಿ ಹಿರಿಹಿಗ್ಗಿದೆ. ಅವರೇ ಫ್ರೋ ಹಳ್ಯಾಳ್. ಮನಶಾಸ್ತ್ರಜ್ಞರು. ಅವರ ಮಾತು ನಿಜಕ್ಕೂ ಸೆಳೆಯಿತು. ಅಂತೆಯೇ ಧಾರವಾಡ ಕಮೀಷನರೇಟ್ ನಲ್ಲಿದ್ದ ಹಿರಿಯ ಅಧಿಕಾರಿಗಳ ಸರಳತೆ, ಸಜ್ಜನಿಕೆ ಆದರ್ಶನೀಯವಾಗಿತ್ತು. ಮತ್ತೆ ಕಾರ್ಟೂನ್ ಮುಖಚಹರೆ, ನಿರರ್ಗಳ ಮಾತುಗಾರಿಕೆ, ಕನ್ನಡ-ಹಿಂದಿ-ಇಂಗ್ಲೀಷ್ ಸಾಹಿತ್ಯದೊಳಗಣ ರಸಹೀರಿದ ದುಂಬಿಯಂತೆ ನಮ್ಮಲ್ಲಿದ್ದ ಮಕರಂದ ಹೀರಬಯಸಿದ ವಾಡಪ್ಪಿ ಅವರು, ಅವರೊಳಗಿದ್ದ ಒಬ್ಬ ಶ್ರೇಷ್ಠ ಓದುಗನನ್ನು ಪರಿಚಯಿಸಿದರು. ಓದುವ ಹುಚ್ಚು ಹತ್ತಿಸಿದರು. ಆದರೆ ಅದು ಇಳಿದ ಮಾತು ಬೇರೆ ! ಅಂತೂ, ಹಳೇ ಗೆಳೆಯರೆಲ್ಲಾ ಮತ್ತೆ ಒಂದೆಡೆ ಸೇರಿದ್ದೆವು. ಬಹುತೇಕರೆಲ್ಲರೂ ಡಿಪಾರ್ಟ್ ಮೆಂಟ್ ಬಿಟ್ಟು ಹೊರಬರಲಿಲ್ಲ. ಆದರೆ ನಾ ನನ್ನೊಳಗೇ ಮೌನಿಯಾಗಿದ್ದೆ. ಅಭಿಮಾನಿಗಳು ಕೇಳಿದಾಗ ಗುನುಗುತ್ತಿದೆ. ಹಳೇಯ ಬಿಎಡ್ ದಿನಗಳು ನೆನಪಾಗುತ್ತಿದ್ದೆವು. ಅಂದಹಾಗೆ ಮರೆತಿದ್ದೆ. ಮೊದಲ ಮದುವೆ ನಡೆದು ಮೊದಲ ದಿನ ಕಳೆದಿತ್ತು. ಮರುದಿನವೇ ಟ್ರೈನಿಂಗ್ ಬಂದಿದ್ದರು ನಮ್ಮ ತಮ್ಮಯ್ಯ. ಮೊದಲ ತರಬೇತಿ ದಿನವೇ ಆ ವಿಚಾರ ಗೆಳೆಯರಗುಂಪಿಗೆ ತಿಳಿಯಿತು. ಇಡೀ ಐದೂ ದಿನ ಟ್ರೈನಿಂಗ್ ನಲ್ಲಿ ಅವರೇ ಹೀರೋ....ಮಾತು ಮಾತಿಗೂ ರೇಗಿಸಿ, ಪೇಚಿಗೆ ಸಿಲುಕಿಸಿ ಗೋಳು ಹೊಯ್ದುಕೊಂಡೆವು. ಅವರೇ ತಮ್ಮಯ್ಯ. ಮಾಕೋಡು ಹೆಡ್ ಮಾಸ್ಟರ್. ಅವರ ಮುಗ್ದತೆಗೆ ಎಲ್ಲರೂ ನಕ್ಕು ಅವರ ಸ್ನೇಹಿತರಾದರು. ನಾಳೆ
ಆದರೆ
 
 
ಕಡೆ ದಿನ. ಇವತ್ತೇ ಒಂದು ರೌಂಡ್ ಹೊಡೆಯೋ ಆಸೆ. ಮುಂಜಾನೆ ಐದಕ್ಕೆ ಎಲ್ಲರೂ ರೆಡಿ ಸವದತ್ತಿಗೆ. ಹೊರಟಿತು ಗೆಳೆಯರ ಬಳಗ, ಸಾರಂಗಿ ಮಂಜು-ಹುಳ, ಮಮ್ಮಿ ಪ್ರತಿಭಾ, ಭಾರತಿ, ಮಮತಾ ಜೊತೆಗೆ ಶಶಿ ಮತ್ತು ನಾನು. ಅಂತೂ ಬಸ್ಸೇರಿ ತಲುಪಿದೆವು ಅಮ್ಮನ ಗುಡಿ. ಅಲ್ಲಿ ಕಾಸಿದ್ದೋನೆ ಬಾಸು. ಕಾಸ್ ಕೊಟ್ಟೋನ್ ಗೆ ದರ್ಶನ ಸಲೀಸು. ಅಂತೆ ವೇಳೆ ಇಲ್ಲದೇ, ಆರು-ಮೂರು ಕಾಸಿಟ್ಟಿದ್ದ ನಾವೆಲ್ಲಾ ಸರದಿ ನಿಲ್ಲುವ ಮನಸ್ಸಿಲ್ಲದೇ ದುಡ್ಡು ಕೊಟ್ಟು ಸವದತ್ತಿ ಅಮ್ಮನ ದರ್ಶನ ಪಡೆದೆವು. ಎಲ್ಲೆಲ್ಲೂ ಕುಂಕುಮ. ಅರಿಶಿನ. ಮೈ-ಕೈ ಎಲ್ಲಾ ಅದೇ. ಭಕ್ತರು ಭಾವಪರವಷರಾಗಿದ್ರು. ದುಷ್ಟರು ದೆವ್ವ ಹಿಡಿದವರಂತೆ ಆಡ್ತಿದ್ರು. ಕಾಲಿಟ್ಟಲ್ಲೆಲ್ಲಾ ಗೊಜ್ಜೆ. ಕಾಲಬೆರಳ ಸಂದಿಯಲ್ಲಿ ಮಣ್ಣು ಎಗರಿ ಎಗರಿ ಬರುತ್ತಿತ್ತು. ಸುಂದರ ಪ್ರಕೃತಿ. ದೇವಿ ಮನೆಯಿಂದ ಬಸ್ಸಿನ ಮನೆವರೆಗೂ ಸಾಲು ಸಾಲು ಅಂಗಡಿಗಳು. , ನಿಜಕ್ಕೂ ನಮ್ಮ ಐದು ದಿನಗಳು ಅವಿಸ್ಮರಣೀಯ. ಅನಿರ್ವಚನೀಯ ಅನಿಸಿದ್ದು. ಅದು ಸಾಧನಕೇರಿಯ ಸಾರ್ಥಕತೆಯಲ್ಲಿ. ಮರೆತೆನೆಂದರೂ ಮರೆಯದ ಬೇಂದ್ರೆ ಸ್ಪರ್ಶಿಸಿದ ಸುಖ. ಅವರು ನಡೆದಾಡಿದ, ಕುಂತು-ನಿಂತು-ಉಂಡು-ಮಲಗಿ-ಎದ್ದು-ಬಿದ್ದು-ಹೊದ್ದು-ಘಮ ಘಮ್ಮಾಡಿಸಿದ ಅಕ್ಷರ ಸೇವಂತಿ ಸವಿದ ಸಂಭ್ರಮ. ಶ್ರೀಮಾತಾ ನಿಲಯದೊಳಗೆ ಅವರ ಇರುವಿಕೆಯನ್ನೂ ಪ್ರತಿಷ್ಠಾಪಿಸಿದ ಆ ಗಾಳಿ, ಅವರ ಪಾದಧೂಳಿನಿಂದ ಪಾವನಗೊಂಡ ನಮ್ಮ ಪಾದಗಳು...ಅವರ ಸುಪುತ್ರ ವಾಮನ ಬೇಂದ್ರೆಯವರೊಡನೆ ಆಡಿದ ಮಾತು, ಜ್ಞಾನಪೀಠ ಸೇರಿದಂತೆ ಹಲವು ಪ್ರಶಸ್ತಿಗಳು ನಮ್ಮ ನೋಡಿ ನೋಡಿ ಜೋರು ನಗುತ್ತಿದ್ದ ರೀತಿ, ಇಡೀ ವ್ಯವಸ್ಥೆಯನ್ನು ಅಣಕಿಸುತ್ತಿದ್ದವು. ಫೋಟೋ ಕ್ಲಿಕ್ಕಿಸಿ ಕ್ಲಿಕ್ಕಿಸಿ ಶಶಿಗೂ ಕೈ ನೋವ್ ಬಂದಿರಬೇಕು. ಆದರೆ ಬೇಂದ್ರೆಅಜ್ಜನ ಇರುವಿಕೆಯನ್ನ ನನ್ನಕ್ಷಿಪಟಲದಲ್ಲಷ್ಟೇ ಅಲ್ಲದೇ ಎಲ್ಲರ ಕಣ್ಣಿಗೂ ರಾಚುವಂತೆ ಹಿಡಿದಿಡಬೇಕೆಂಬ ಬಯಕೆಯಿಂದ ಫೋಟೋ ಕ್ಲಿಕ್ಕಿಸಿದ್ದಾಗಿತ್ತು. ಕಡೆಗೆ, ಟ್ರೈನಿಂಗ್ ಮುಗಿಯಿತು ಅನ್ನೋ ಸಮಯ ಬಂತು. ಧಾರವಾಡ ಪೇಡಾ ಭರ್ಜರಿ ಖರೀದಿ. ಅಮ್ಮನಿಗೊಂದು ಮೆಂತ್ಯ ಕಲರ್ ಸೀರೆ.. ಹುಡುಕಿ ತಡಕಿ ತೆಗೆದುಕೊಂಡಾಗಲೇ ಸಮಾಧಾನದ ನಿಟ್ಟುಸಿರು. ಹೀಗೆ ನೆನಪುಗಳ ಬುತ್ತಿ ಕಟ್ಟಿ ಹೊರಟಿತು ಹುಬ್ಬಳ್ಳಿ-ಮೈಸೂರು ರೈಲು.
ಆದರೆ ಟ್ರೈನಿಂಗ್ ಮುಗಿಸಿ ಹೊರಬರುವಾಗ ಉಳಿದಿದ್ದು ನಿಜಕ್ಕೂ ಅವಿಸ್ಮರಣೀಯ ಅನುಭವ