ಗುರುವಾರ, ಆಗಸ್ಟ್ 4, 2011

ಮಂಜಿನ ಸಂಜಿ


ಪವಿತ್ರವಾದ ಮನಸುಗಳು. ಅದು ಪ್ರಶಾಂತ ಪ್ರಯಾಣ. ಶುಭದಾಯಕ ಕಾಯಕ. ಸುಂದರ ಕಥನಕ್ಕಿಷ್ಟು ಸಾಕ ? ಮಂಜಿನ ಹನಿ ಬೇಕಾ ? ಬೇಕಿತ್ತು. ಅದು ಮಂಜಿನ ಹನಿಗಳೇ ಮುತ್ತಾದ ಹೊತ್ತು. ಅಲ್ಲೆನ್ನ ಮೌನವಿತ್ತು.ಮನದಲ್ಲೇ ಮಿಡಿತವಿತ್ತು.

ಸದ್ದು ಮಾಡಿದ ಸುದ್ದಿ. ನಿಶ್ಚಲವಾಗಹೊರಟ ಮನಸು ವಿಚಲವಾದಾಗ, ಒಂಟಿತನಕೆ, ಇಲ್ಲದಿತ್ತೆ ಜಂಟಿಬಯಕೆ ? ಎಂಬ ಪ್ರಶ್ನೆ ಮೂಡುವುದು ಸಹಜ. ಈ ಸಹಜತೆ ಬೆನ್ನೇರಿ ಸ್ನೇಹಿತೆ. ಒಂದು ಒಳ್ಳೆಯ ಕೆಲಸ. ಇದಕ್ಕೆ ಹಲವು ಕೈಗಳು. ಇಲ್ಲಿ ನನ್ನದೊಂದು ಉಗುರು ಗುರುತು ಎಂಬ ಹೆಮ್ಮೆ. ಈ ಪಯಣಕ್ಕೆ ಕಾರಣವೇ 'ಹೂವಿನ ಜೊತೆ ನಾರು ಸ್ವರ್ಗ ಸೇರಿತು'ಎಂಬ ಕೆಲಸ. ಸ್ನೇಹಿತೆಯ ನಿರರ್ಗಳ ಮಾತು, ಮನದಲ್ಲೇ ಕೂತು ಇರಲಾಗದೆ ಚಿಮ್ಮುತ್ತಿತ್ತು - ಸಾರಂಗದಂತೆ. ಚರ್ಚಿಸುತ್ತಿತ್ತು - ವಿಮರ್ಶಕನಂತೆ. 


ಸಮಾಜ ಕೊಳಕಿದೆ. ಹೌದು. ಇಲ್ಲವೆಂದು ಈಗಳೆವವರಾರು ? ಇಲ್ಲಿಯೇ ನಾವಿದ್ದೇವೆ. ನಿಜ. ಇದಿನ್ನೂ ಕಟು ಸತ್ಯ. ಈ ಸತ್ಯದೊಳಗೆ ಅಪಥ್ಯ ಕಥೆ ಹೀಗೇನೆ. ಹೆಸರಿಗೆ ಅಧಿಕಾರಿ. ಅಂತೆಯೇ ಮಹದುಪಕಾರಿ. ಪರೋಪಕಾರಿ. ಜೊತೆಗೆ ಆದರ್ಶಗಳ ಸವಾರಿ. ಇವಕ್ಕೆಲ್ಲ ಇಲ್ಲೆಲ್ಲಿದೆ ಜಾಗ ನೀವೇ ಹೇಳಿರೀ ? ಆದರೆ ಒಂದಂತೂ ನಿಜ. ಒಂದಿನಿತು ಇಲ್ಲದೆ ಸಜ, ಬೆಳೆಯಲಾರ ಮುಗಿಲಿನೆತ್ತರಕೆ, ಹೊಳೆಯಲಾರ ಸೂರ್ಯ ನಭಕೆ. 

ಒಳ್ಳೆ ಹುಡುಗರ ದೌರ್ಬಲ್ಯ. ಅದು ಒಂಟಿತನ. ಏಕಾಂತ. ಮೌನಿತ್ವ. ಒಮ್ಮೊಮ್ಮೆ ಹೆಮ್ಮೆ. ಜೊತೆಜೊತೆಗೆ ಕೀಳರಿಮೆ. ಅದು ಸಾಲದಕ್ಕೆ ಹಿರಿಮೆ, ಗರಿಮೆ, ಎಲ್ಲದ್ದಕ್ಕಿಂತ ಒಲುಮೆ. ಬಯಸಿದ ಬಗೆಯಾಕೆ ಸಿಗದಾಗ ಈ ಮನವ್ಯಾಕೆ ? ಎಂಬ ಚಿಂತೆ. ಇದೇ ಖಾವಿಯಾಗುವಂತಹ ಚಿತೆಗೇರಿಸುವ ಕೆಲಸಕ್ಕೆ ಕೈ ಹಾಕಿಸುವುದು. ಅಂತೆಯೇ ಇಲ್ಲಿಯೂ ಗೆಳೆಯರಿಗಾಗಿರುವುದು. ಬಹುಶ ಒಂದು ಒಳ್ಳೆ ಸ್ನೇಹ-ಒಳ್ಳೆ ಮನಸು-ಒಳ್ಳೆ ಹೊಗಳಿಕೆ-ಒಳ್ಳೆಯ ತೆಗಳಿಕೆ ಸಿಗದಾಗ ಈ ರೀತಿ ಆಗುತ್ತೆ. ಅದರಲ್ಲೂ ಒಳ್ಳೆ ಹುಡುಗರಿಗೆ ಒಳ್ಳೆ ಹೆಣ್ಣು ಜೀವದ ಅವಶ್ಯಕತೆ ಇದೆ. ಇದು ಇಲ್ಲದ್ದಾಗ ಇಂತಹ ಘಟನೆ ನಡೆಯುತ್ತವೆ ಎಂದು ನನ್ನನಿಸಿಕೆ. 

ಕಡೆಗೂ, ಮಠದೊಳಗಣ ಬೆಕ್ಕುಇಲಿಯ ಕಂಡು ಪುಟ ನೆಗೆದಂತಾಯ್ತು ಕಾಣಾ ರಾಮನಾಥ...ಎಂಬ ದಾಸಿಮಯ್ಯನ ವಚನದಂತೆ ಅವರು ಬಂದರು. ಆ ನೆನಪ ಇವರು ಹೊತ್ತು ತಂದರು. ಲತೆಯಂತೆ ಮಾತಿಗಿಳಿದು, ಜೊತೆಯಾಗಿ ಊಟಕ್ಕಿಳಿದು, ಕಥೆಯಾಗಿ ಕೆಳಕ್ಕಿಳಿದು ಬಂದೆವು. ನಾನು ಸಹೃದಯ. ಅಂತ ಎಲ್ಲರ ನಂಬಿಕೆ. ಅದೇ ನನಗೆ ಜೀವಂತಿಕೆ. ಅದಕ್ಕೆ ನೆನಪಾಗುತ್ತಿತ್ತು, ನಮ್ಮ ವಿವಿ ಮುಂದಿನ ಶಿಲಾಸ್ತಂಭದಲ್ಲಿದ್ದ "ಉಭಯ ಮಧ್ಯೆ ಚಲಿಪ ವಿದ್ಯೆ ಪೂರ್ಣ ಶೂನ್ಯ ಕುಂಡಲಿನಿ" ಎಂಬ ವ್ಯಾಖ್ಯೆ..