ಗುರುವಾರ, ಸೆಪ್ಟೆಂಬರ್ 25, 2014

ಪರಂಪರೆಯ ಪರಿ

ದಸರಾ, ದಸರೆ ರಜೆ. ಈ ಪದಗಳು ಕಿವಿಗೆ ಬಿದ್ದರೆ, ಅಲ್ಲಿ ಪರಂಪರೆಯ ಪರಿ ತೆರೆದುಕೊಳ್ಳುತ್ತೆ.  ಮೈಮನಗಳ ಸುಳಿಯಲ್ಲಿ ನವಿರೇಳುತ್ತೆ. ಗತಕಾಲದ ವೈಭವ ಮರಳಿ ಬರುತ್ತೆ. ನೆನಪುಗಳ ತೋರಣ ತರುಣರಂತಾಗುತ್ತವೆ.  

ಇದು ದಸರಾ ಸಮಯ. ಮೈಸೂರಿಗೆ ಮೈಸೂರೇ ಸಂಭ್ರಮದಲ್ಲಿ ಮಿಂದಿದೆ. ದಸರಾ ದರ್ಬಾರ್ ಅರಮನೆಗೆ ಮಾತ್ರ ಸೀಮಿತವಲ್ಲ. ಪಟ್ಟಣಕ್ಕೆ ಪಟ್ಟಣವೇ ದರ್ಬಾರ್ ಗತ್ತು ಗೈರತ್ತಿನಲ್ಲಿದೆ. ಬೀದಿ ಬದಿಯಲಿ ವ್ಯಾಪಾರ ಬಲು ಜೋರಾಗಿದೆ. ಮಾರುಕಟ್ಟೆ ಕಟ್ಟೆ ಒಡೆದಂತೆ ಬ್ಯುಸಿ ಆಗಿದೆ. ದೇಶಿ-ವಿದೇಶಿಗರ ಕಣ್ಣು ದೃಶ್ಯವೈಭವದಲ್ಲಿ ತುಂಬಿಕೊಳ್ಳುತ್ತಿದೆ.


ಟೀನೇಜುಗಳು ಕಾಲೇಜುಗಳಿಗೆ ಟೆನ್ಷನ್ ಇಲ್ಲದಂತೆ ಮಾಡಿವೆ. ಒಂದೆಡೆ ಯುವ ಸಂಭ್ರಮ, ಮತ್ತೊಂದೆಡೆ ರೈತ ದಸರ, ಮಗದೊಂದೆಡೆ ಮಕ್ಕಳ ದಸರ, ಇನ್ನೊಂದೆಡೆ ವಸ್ತುಪ್ರದರ್ಶನ-ಬಣ್ಣ ಬಣ್ಣದ ಸಿನಿಮಾ ಸಿಂಚನ. ಇದೆಲ್ಲದಕ್ಕೂ ಕಳಸಪ್ರಾಯ ಜಂಬೂ ಸವಾರಿ. ಇದು ಕರ್ನಾಟಕದ ಕೀರ್ತಿಕಳಸದ ಮಾದರಿ. ಹಲವು ನೆಲೆಯ ಕಲೆಯ ಬಲೆಯ ಸಮ್ಮೋಹನ ಶಕ್ತಿಯನ್ನೇ ನಾಡ ಅಧಿದೇವತೆ ಇಲ್ಲಿ ಧರೆಗಿಳಿಸಿದಂತೆ ಭಾಸವಾಗುತ್ತದೆ.

ಮಕ್ಕಳಿಸ್ಕೂಲು ದಸರಾದಲ್ಲಲ್ವೇ ?

ಈ ದಸರಾ ರಜೆ ಬಂದ್ರೆ, ಮೈಸೂರಲ್ಲಿ ಮಕ್ಕಳಿಸ್ಕೂಲು ತೆರೆಯುತ್ತೆ. ಅದು ಮನೆ ಮನೆಗಳಲ್ಲಿ. ಮನ ಮನಗಳಲ್ಲಿ. ದಸರೆಯ ಹಿನ್ನೆಲೆ, ವೈಶಿಷ್ಟ್ಯ, ಸೊಬಗು, ಬೆರಗು ಮಕ್ಕಳ ಕಣ್ಣಲ್ಲಿ ಠಿಕಾಣಿ ಹೂಡುತ್ತೆ. ನನ್ನ ಕಾಲಿನ್ನು ಚಡ್ಡಿಗೆ ಹೊಂದಿಕೊಂಡಿದ್ದ ಕಾಲ. ನಮ್ಮೇಷ್ಟ್ರು ರಜೆ ಅಂತ ಹೇಳೋಕೆ ಮುಂಚೆನೇ ಸ್ಕೂಲಿಗೆ ಚಕ್ಕರ್. ಮೈಸೂರ ನಂಟಿರಷ್ಟರ ಮನೆಗೆ ಹೋಗಲು ತಯಾರ್. ಏಕೆಂದ್ರೆ, ಬೀದಿ ಬೀದಿಯಲಿ ಬೆಳಕಿನ ತೋರಣ. ಮಳಿಗೆ ಮಳಿಗೆಗಳಲಿ ಕೆಂಪುಹಾಸಿನ ಕಾರಣ. ಸಿಟಿ ಮಧ್ಯೆ ಬಂದು ಸುತ್ತೋದು ಅಂದ್ರೇನೆ ಥ್ರಿಲ್. ಹರೆಯದ ಹಪಹಪಿ ಇಲ್ಲದ ಮನಸು, ಬೆರಗಿನ ಕಣ್ಣಿಂದಲೇ ಬೆವರಿಳಿವ ತನಕ ಸುತ್ತಿ ಸುತ್ತಿ ಸುಮಧುರ ಭಾವನೆಗಳನ್ನು ತನ್ನದಾಗಿಸಿಕೊಳ್ಳುತ್ತಿತ್ತು. ಆಗತಾನೆ ಬೀದಿಗೆ ಬಂದಿದ್ದ ಪಾನಿಪುರಿ ಅಣ್ಣತಮ್ಮಂದಿರನ್ನು ಕೆಣಕೋದು ಅಂದ್ರೆ ನಾಲಿಗೆಗೆ ಚಪಲ. ತಿನ್ನೋವರೆಗೂ ಎದೆಯೊಳಗೆ ವಿಲವಿಲ. ಇನ್ನು ಸುತ್ತಿಸುಳಿದು ವಸ್ತುಪ್ರದರ್ಶನಕ್ಕೆ ಕಾಲಿಟ್ಟರೆ ಅಲ್ಲೊಂದು ಹೊಸ ಲೋಕ. ಗಿಜಿಗಿಜಿ ಗುಟ್ಟುವ ಗೀಜಗನ ಗೂಡಿದು. ಇಲ್ಲಿ ಏನುಂಟು ಏನಿಲ್ಲ. ತಲೆ ತಿರುಗುವ ಬಣ್ಣದ ಬುಗುರಿಯಿಂದ, ಆಗಸಕ್ಕೆ ಏಣಿಹಾಕಿದಂತಿರುವ ಗಿರಿಗಿಟ್ಲೆ, ಅಚ್ಚರಿಮೂಡಿಸೋ ಮಳಿಗೆಗಳು, ಭೂತದ ಮನೆ…..ಹೀಗೆ, ಸಾಲು ಸಾಲು ಊರುಗೋಲು. ಆದರೆ, ಕೈಯಲ್ಲಿ ಕಾಸಿಲ್ಲ. ಕೈಹಿಡಿದವರ ಕೇಳಲು ಮನಸಿಲ್ಲ. ಆದರೂ, ಅಪ್ಪ ತೋರಿಸಿದ ಮೊದಲ ಬಾರಿಯ ಟಾರ್ಚ್ ಆಫ್ ಪೆರೆಡ್   ಮತ್ತೆ ಮತ್ತೆ ಬಾಲ್ಯವನ್ನೇ ಬೇಕಿನಿಸುತ್ತಿದೆ.

ಹರೆಯದ ಹಳಿಯಲಿ…

ಮಕ್ಕಳಾಗಿರುವಾಗಲೇ ಅಷ್ಟು ರುಚಿಸುವ ದಸರಾ, ಇನ್ನು ಹರೆಯದಲ್ಲಿ ಕೇಳಬೇಕೆ ? ಖಂಡಿತ ಪದಗಳಿಗೆ ನಿಲುಕದ ಕಾಲವಿದು. ನೆನಪಿರಲಿ ಚಿತ್ರದ “ಕೂರಕ್ ಕುಕ್ಕರಳ್ಳಿಕೆರೆ, ತೇಲೋಕ್ ಕಾರಂಜಿಕೆರೆ…..” ಈ ಹಾಡಿನ ನಿಜದರ್ಶನಕೆ ದಸರೆಯೇ ಸಕಾಲ. ದೇಸಿ ಹಕ್ಕಿಗಳು, ನೆರೆವಾಸಿ ಹಕ್ಕಿಗಳು ಇಲ್ಲಿ ಗರಿಗೆದರಿದ ನವಿಲಾಗುತ್ತವೆ. ವಸಂತನ ಒಸಗೆಯೂ ಹರೆಯದ ಬೆಸುಗೆಯೂ ಹದವರಿತ ಮೈಸೂರು ಪಾಕಿನಂತೆ ಸುಮಧುರ. ನಾನೂ ಆಗ, ಪದವಿ ಎಂಬ ಪದ ಕಲಿಯುತ್ತಿದ್ದೆ, ಮಹಾರಾಜ ಕಾಲೇಜಿನಲ್ಲಿ. ಕನ್ನಡ ನುಡಿಯಂಗಳದ ಹಿರಿಮನೆಯ ಮರಿಮಕ್ಕಳಂತೆ ಬಿಂಕದಿಂದ ಮಹಾ ರಜಾ ಕಾಲೇಜಿನಲ್ಲಿರುವಾಗ ದಸರೆ ಸೊಬಗು ಕಣ್ತುಂಬಿಕೊಂಡ ವೈಖರಿಯೇ ಅಚ್ಚರಿ. ಮೊದಲೇ ಚಿತ್ತ ಚಂಚಲ. ಹರೆಯದಲ್ಲಿ ಅದರ ವೇಗ ಇಮ್ಮಡಿ. ಇಂತಿಪ್ಪ, ದಿನಗಳಲಿ, ಮಧು, ಶಶಿ, ನಟ, ಲೋಹಿ ಹೀಗೆ ನಮ್ಮ ಗೆಳೆಯರ ಬಳಗ ಪ್ರೇಮಪಕ್ಷಿಗಳನ್ನು ನೋಡಿಯೂ ನೋಡದಂತೆ ನಮ್ಮದೇ ನೆಪಗಳಿಗೆ ಋಣಿಯಾಗುತ್ತಿದ್ದೆವು. ಯುವ ದಸರಾದಲ್ಲಿನ ಭಾವಯಾನದ ಸಮ್ಮೋಹನಕ್ಕೆ ಶರಣಾಗುತ್ತಿದ್ದೆವು. ಅಂತೆಯೇ, ಪ್ರಶಸ್ತಿ ವಿಜೇತ ಸಿನಿಮಾಗಳ ನಿರ್ದೇಶಕರಾಗುತ್ತಿದ್ದೆವು. ನನಗೆ ಇನ್ನೂ ಚೆನ್ನಾಗಿ ನೆನಪಿದೆ..’’ಕಾನೂರು ಹೆಗ್ಗಡತಿ’’  ಲಕ್ಷ್ಮೀ ಚಿತ್ರಮಂದಿರಕೆ ಕಾಲಿಟ್ಟ ಕ್ಷಣದಲ್ಲಿ “ಕಾಳು ಮೆಣಸು” ತರುವ ಶ್ರೀನಿವಾಸ ಪ್ರಭು ಪಾತ್ರ ಬಂದಾಗಲೆಲ್ಲಾ ಸಿಳ್ಳೆಗಳಲಿ ಥಿಯಟರ್ ಮುಳುಗಿರುತ್ತಿತ್ತು. 

ವಯಸಿನ ಮನಸಲಿ…

ನನಗೆ ಈಗಷ್ಟೇ ವಯಸ್ಸಾಗುತಿದೆ. ಆದರೆ, ವಯಸ್ಸಾದವರ ಮನಸ್ಸಿನಾಳ ಆಗಲೇ ಅರಿವಿನಲ್ಲಿತ್ತು. ನನ್ನಜ್ಜ ಕಾಳಯ್ಯ ಅಂತ. ಊರಿನ ಹೊರಗೆ ಕಾಲಿಡದ ಪುಣ್ಯಾತ್ಮ ಅದೊಮ್ಮೆ ದಸರೆಗೆ ಹೊರಟ್ಟಿದ್ದರು. ಅವರಿಗೆ ನಾನೇ ಸಾರಥಿ. ನನ್ನಜ್ಜನಿಗೆ ಅಪಾರ ದೈವ ಭಕ್ತಿ, ಚಾಮುಂಡಮ್ಮನಲ್ಲಂತೂ ಶ್ರದ್ಧೆ ಕಾಳಜಿ. ಜಂಬೂ ಸವಾರಿ ದಿನ ಮೈಸೂರಿಗೆ ಮೈಸೂರೇ ಅರಮನೆಯೇ ನಮ್ಮನೆ ಎಂಬಂತೆ ಸುತ್ತ ದಟ್ಟೈಸಿರುತ್ತೆ. ನಾವು ಸಹ ಸಯ್ಯಾಜಿರಾವ್ ರಸ್ತೆಯ ಕೆ.ಆರ್.ಎಸ್. ಆಸ್ಪತ್ರೆ ಮುಂಭಾಗದ ಚಪ್ಪರದಡಿ ಕುಳಿತು, ಮುಂದೆ ಮುಂದೆ ಸಾಗಿ ಬಂದ ಸ್ತಬ್ಧಚಿತ್ರಗಳು, ಹಿಂದೆ ಹಿಂದೆ ವೈಭವ ಹೊತ್ತು ಬಂದ ಅಂಬಾರಿ ನೋಡಿದೆವು. ರತ್ನಖಚಿತ ಅಂಬಾರಿ, ಆನೆ ಮುಂದಣ ಪೇಟ, ಒಂಟೆದಳ, ಅಶ್ವದಳ, ಪೊಲೀಸ್ ನಗಾರಿ, ವೀರಗಾಸೆ, ಕೋಲಾಟದ ಕುಣಿದಾಟದ ಕಲಾವಿದರನ್ನು ಟಾಟಾ ಮಾಡುತತ್ತಲೇ ನಮ್ಮವರಾಗಿಸಿಕೊಂಡೆವು. ಈ ಸಂದರ್ಭ, ಕೆಲವರು ಸೀಟು ಸಿಗದೇ, ಮರಗಳ ಮೇಲೆ ಕುಳಿತಿರುತ್ತಿದ್ದ ದೃಶ್ಯ, ಮಹಡಿಗಳ ಮೇಲೆ, ಮಹಡಿಯ ಮೇಲಿನ ನೀರಿನ ಟ್ಯಾಂಕ್ ಗಳ ಮೇಲೆ, ಕೆ.ಆರ್.ವೃತ್ತದ ಸುತ್ತಣ ಬಿಲ್ಡಿಂಗ್ ಗಳ ಮೇಲೆ ಕುಳಿತಿರುತ್ತಿದ್ದ ದೃಶ್ಯ ಇಂದಿಗೂ ಕಣ್ ಕಟ್ಟುತ್ತದೆ. ಅಂದಹಾಗೆ, ಈ ಕ್ಷಣ ಕಣ್ತುಂಬಿಕೊಳ್ಳುವುದರೊಳಗೆ ಒಂದ್ಹತ್ತು ಲೋಟ ಮಜ್ಜಿಗೆ, ನೀರು, ಸೌತೆಕಾಯಿ, ಕಲ್ಲಂಗಡಿ ಎಲ್ಲವನ್ನೂ ಈ ಕಿರುಹೊಟ್ಟೆ ಅರೆದು ಬಿಸಾಕಿರುತ್ತಿತ್ತು.

ಆಗಿನ ವೈಭವ, ಈಗಿನ ವೈಭವ ಅಂತಲ್ಲ. ವೈಭವ ಎಂದೆಂದಿಗೂ ವೈಭವವೇ. ಆದರೆ, ನೋಡುವ ಮನಸಿನ ವಯಸು ಬದಲಾಗಿದೆ. ಬರ ಬರನೆ ಬರುವ ಶಕ ವರ್ಷ, ಸಖನ ಹರ್ಷವ ಇಳಿಸಿದೆ. ಹರೆಯಕ್ಕೆ, ವಯಸಿಗಷ್ಟೇ ದಸರೆ ಕಳೆಗುಂದಿದೆ. ಆದರೆ, ಎಳೆ ಮನಗಳಿಗೆ ಇದು ಎಂದೆಂದಿಗೂ ವಿಶ್ವವಿಖ್ಯಾತ ವೈಭವವೇ. MYಸೂರೆಂದರೆ ಅದು ನಮ್ಮನಿಮ್ಮ ಎಲ್ಲರ ಸೂರೇ(ಮನೆ). ಮೈಮನಸೂರೇ….!!!!