ಹೆಸರು ಪುಟ್ಟಲಕ್ಷ್ಮಮ್ಮ. ಗಂಡ ಸುಬ್ಬಾಚಾರ್ಯ. ಊರು ಕಾಮಗೊಂಡನಹಳ್ಳಿ. ಹಣೆ ತುಂಬ ರುಪಾಯಿ ಅಗಲದ ಕುಂಕುಮ. ಬಾಯಿತುಂಬ ಎಲೆಯಡಿಕೆ ಘಮಲು. ಕೆಂಪನೆ ಅದರಗಳು. ಗಿಳಿ ಮೂಗು. ಮೂಗಿಗೆ ಮನಸೋಲದ ಮೊಮ್ಮಕ್ಕಳಿಲ್ಲ. ಗಿಳಿಮೂಗಜ್ಜಿ ಎಂದೇ ಅನ್ವರ್ಥ. ಕೈ ತುಂಬ ಬಳೆ. ತಲೆ ತುಂಬ ಹೂವು. ಗಿಂಡಿದರೆ ರಕ್ತಚಿಮ್ಮುವಂತೆ ನಮ್ಮಜ್ಜಿ. ನನ್ನ ತಾಯಿಗೆ ಚಿಕ್ಕಮ್ಮ. ಈ ಅಜ್ಜಿ ಒಡಹುಟ್ಟಿದವರು ಐದು ಜನ. ಹಿರಿ ಹೆಂಡತಿ ಮಕ್ಕಳು ಹನ್ನೆರಡು. ಆದರೆ ತನ್ನ ಕರುಳಬಳ್ಳಿಯಲ್ಲಿ ಆರು ಜನ ಗಂಡ್ಮಕ್ಳು. ಮೂವರು ಹೆಣ್ಮಕ್ಕಳು. ಒಂಭತ್ತು ಜನರ ಕುಟುಂಬಗಳು. ಮೊಮ್ಮಕ್ಕಳು. ಮರಿಮಕ್ಕಳು. ತುಂಬಿದ ಕುಟುಂಬ. ತುಂಬಿದ ಕೊಡಗಳು. ಅಷ್ಟೇ ಸಂಕಷ್ಟಗಳು. ಅಷ್ಟೇ ಸುಖಾನುಭವಗಳು. ಊರಿಗೆ ಊರೇ ಗೌರವಿಸುವ ಪರಿ ಅಚ್ಚರಿ. ಅಂದಿನ ಕಾಡು ದಾರಿಯ ಕಥೆಗಳೇ ಕೇಳಲು ಚೆಂದ. ಕಾಡಿನಿಂದ ಕಾಡಿಬೇಡಿ ತಂದ ಜೀವನದ ಕಥೆ ಉಪಕಥೆಗಳು ನಿಜಕ್ಕೂ ಆಶ್ಚರ್ಯ. ಇಂತಿಪ್ಪ ನಮ್ಮಜ್ಜಿ ಇನ್ನಿಲ್ಲ ಎಂಬುದೇ ಭಾರವಾದ ವಿಷಯ. ಅವರು ನಮ್ಮ ಕುಟುಂಬದಲ್ಲಿ ಅಮರ. ಅವರ ನೆನಪು ಸದಾ ಹಸಿರು. ಅವರ ಆತ್ಮಕ್ಕೆ ಶಾಂತಿ ಸಿಗಲಿ.