ಶನಿವಾರ, ಮೇ 7, 2011

ಮತ್ತದೇ ಬೇಸರ...ಮತ್ತದೇ ಸಂಜೆ...


ಆಕೆಯ ನೆನಪೇ ಇನ್ನು ಮಾಸಿಲ್ಲ. ಮರಳಲಾರದ ಶಿಲ್ಪ ಮರೆಯಾಗಿಲ್ಲ. ಆಗಲೇ ಮತ್ತೊಂದು ನೋವು. ಮತ್ತದೇ ಬೇಸರ. ಮತ್ತದೇ ಸಂಜೆ. ಮತ್ತದೇ ಏಕಾಂತ. ಅದೇಕೋ, ದೂರದ ಹತ್ತಿರದವರು, ದೂರವಾಗುತ್ತಲೇ ಇದ್ದಾರೆ. ಮೊನ್ನೆಯಷ್ಟೇ ರಜೆ ಹಾಕಿ, ಊರಿಗೆ ಹೋಗಿದ್ದೆ. ದಸರೆ ಹೆಸರಿನಲ್ಲಿ ವಿಶ್ವಕ್ಕೊಂದು ವೇದಿಕೆ ನೀಡಿದ್ದ ‘ಮೈ’ಸೂರು ಇನ್ನು ತನ್ನ ವೈಭವದಿಂದ ಹೊರಬಂದಿರಲಿಲ್ಲ. ಆ ಗತ್ತು, ಗೈರತ್ತು ನಾ ಹೋಗುವ ದಾರಿದೀಪಗಳಲ್ಲಿ, ರಸ್ತೆ ಇಕ್ಕೆಲಗಳ ಸೌಂದರ್ಯ ಕಸಿಯುವ ಬಂಟಿಂಗ್ಸ್, ಬ್ಯಾನರ್‌ಗಳಲ್ಲಿ ಪ್ರತಿಫಲಿಸುತ್ತಿತ್ತು.

ನಮ್ಮೂರು ಮಂಚನಹಳ್ಳಿ. ಕೆ.ಆರ್. ನಗರಕ್ಕೆ ೬ ಕಿಮೀ. ಮನೆಗೆ ಹೋದಾಗಲೆಲ್ಲಾ ನಮ್ಮ ಹಳ್ಳಿಗೆ ಹೋಗುವುದು, ಆ ಗದ್ದೆ, ಆ ಹಸಿರು, ನಮ್ಮ ಕೆರೆ, ಹೊಳೆಯ ದಡ, ಬೀಳಲು ಬಿಟ್ಟ ಮರಗಳು, ಮೌನದೊಳಗೇ ‘ಮಗಾ... ಮಗಾ’ ಎಂದು ಮಾತುಗಳ್ಳಬ್ಬರಿಸುವ ಅಯ್ಯ(ಅಜ್ಜ), ಅಮ್ಮ(ಅಜ್ಜಿ)ಯರ ಗುದ್ದಗಳು, ಹೋದಾಗಲೆಲ್ಲಾ ಅಲ್ಲಿ ತನಗೆ ತಾನೆ ಉದುರುವ ಕಂಬನಿ, ಆಪ್ತ ವಿಚಾರಗಳ ಸರಣಿ, ಇವೆಲ್ಲಾ ನನ್ನ ಅವಿಸ್ಮರಣೀಯ ಸಂಗತಿಗಳು. ಮತ್ತೆ ಮತ್ತೆ ಬೇಕೆನ್ನುವ ಸನ್ನಿವೇಶಗಳು. ಹಾಗೇ ಊರಿಗೆ ಹೋದೆ. ಮಾರನೆ ದಿನ. ಎದುರು ಮನೆ ಷಡಕ್ಷರಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದ ಅಂತಾ ಸುದ್ದಿ ಬಿತ್ತು. ಕಣ್ಬಟ್ಟಲಲ್ಲೇ ಅವನಿದ್ದ. ವರ್ಷವಾಗಿತ್ತಷ್ಟೇ ಅವನ ಮತ್ತು ಎದುರು ಮನೆಯ ಅಕ್ಷರಶಃ ಬಡ ಹೆಣ್ಣುಮಗಳು ಪಾಪ(ಧನಲಕ್ಷ್ಮಿ) ರಿಜಿಸ್ಟ್ರಾರ್‍ ವಿವಾಹವಾಗಿ. ತುಂಬಾ ಖುಷಿಯಾಗಿತ್ತು. ಜಾತಿ,ಕುಲ ಗೊತ್ತಿಲ್ಲದ ಹುಡುಗಿ ಕೈ ಹಿಡಿದನಲ್ಲ ಈ ಹುಡುಗ ಅಂತಾ. ೮ ತಿಂಗಳ ಮಗು ಕೂಡ ಇತ್ತು. ಗಾಡಿ ತಕ್ಕೊಂದು ಹಂಪಾಪುರಕ್ಕೆ ಹೋಗಿ, ಡಾಕ್ಟರ್ ಕರೆದು ತಂದೆ. ಆಸ್ಪತ್ರೆಗೆ ಹೋದ ಮೇಲೆ ಗುಣಮುಖನಾಗ್ತಾನೆ ಅಂದುಕೊಂಡೆ. ಆದರೆ, ಸಂಜೆಯಾಗ್ತಲೇ ಮತ್ತೆ ಸೀರಿಯಸ್ ಆಗಿ, ಮೈಸೂರಿಗೆ ಕರೆದು ಹೋಗಿದ್ದಾರೆ ಅಂತಾ ಗೋಳಿಡು ಸದ್ದು ಊರಲ್ಲೆಲ್ಲಾ ಮೊಳಗಿತ್ತು. ಅತ್ತ ಊರಿಗೆ ಹೋಗಿ ಬಂದ ನಾನು ಕೂಡಲೇ, ನಮ್ಮ ಮಿತ್ರ ಸೋಮಶೇಖರ್‍ಗೆ ರಿಂಗಣಿಸಿ, ಕೆ.ಆರ್,ಆಸ್ಪತ್ರೆ ಡಾಕ್ಟರ್‌ಗೆ ತಿಳಿಸುವಂತೆ,,ಹೀಗ್ಗೀಗೆ ಎಂದೇ...ತಕ್ಷಣವೇ ಸ್ಪಂದಿಸಿದ ಅವರು ಸಹಾಯ ಮಾಡುವುದಾಗಿ ಹೇಳಿದರು. ಆದರೆ, ಕ್ಷಣ ಹೊತ್ತಿನಲ್ಲೇ ಆಸ್ಪತ್ರೆ ತಲುಪದೇ ಇರುವ ಷಡಕ್ಷರಿ ಶರೀರ ಹೊತ್ತ ಗೂಡ್ಸ್ ಆಟೋ ಮನೆ ಮುಂದೆ ನಿಂತಿತ್ತು........

ಬೇಸರದಿಂದಲೇ ಬಸ್ ಹತ್ತಿ, ಬೇಸರದಲ್ಲೂ ಬೆಂಬಿಡದ ಬೆಂಗಳೂರು ಸೇರಿದೆ. ಆದರೆ, ಬಂದು ಶಿಫ್ಟ್ ಮುಗಿಸಿ ಮನೆಹೋಗುತ್ತಲೇ ಮತ್ತದೇ ಫೋನು ರಿಂಗಣಿಸಿತು. ‘ಜಯಮ್ಮ ನೇಣು ಹಾಕ್ಕೊಂಡು ಸತ್ತೊದ್ಲಂತೆ ಅಣ್ನಾ...’ಅಂತ ತಂಗಿ ಹೇಳಿದಾಗ ಒಂದಷ್ಟು ಕ್ಷಣ ಮೌನದ ಮೆರವಣಿಗೆ. ಆಡಿದ್ದ ಕುಂಟೆಬಿಲ್ಲೆ, ಅಮಾರೈಟ್...ಅಮಾರೈಟ್, ಬೆಟ್ಟದ ಉಣಸೆ ಹಣ್ಣಿಗಾಗಿ ಊರ ಹಿತ್ತಲುಗಳನ್ನೆಲ್ಲಾ ಸುತ್ತಿ ಹೈರಾಣಾದ ದಿನಗಳು, ಗಲ್ ಗಲ್ ಗಿರಿ ಆಡುತ್ತಾ ನಮ್ಮೂರ ಸಿನೆಮಾ ಟೆಂಟ್‌ನಿಂದಲೂ ಕುಂಟಿಸುತ್ತಾ ಬಂದ ಸಂದರ್ಭ, ತೊಪ್ಪೆಯನ್ನೇ ತುಪ್ಪವಾಗಿಸಿ...ಬೀದಿ ಬದಿ ಗಿಡಗಳನ್ನೇ ಸೊಪ್ಪು ತರಕಾರಿ ಮಾಡಿ, ನಾನೇ ತಯಾರಿಸಿದ್ದ ತಕ್ಕಡಿ ತೂಗಿ ಆಡುತ್ತಿದ್ದ ಅಂಗಡಿ-ಮನೆ ಆಟ, ಎಲ್ಲವೂ ಕಣ್ಣಮುಂದೇ ಧುತ್ತನೇ ಬಂದು ಕುಳಿತವು. ಮ್ಚೇ...ಎಂದು ಅದೆಷ್ಟು ಸಾರಿ ಹೇಳಿದವೋ ನನ್ನ ಧ್ವನ್ಯಂಗಗಳು. ಅಷ್ಟೂ ಸಾರಿಯೂ ಯಾಕೋ...ಮೌನಕಣಿವೆಗೆ ಬಿದ್ದಿತ್ತು ಮನಸು.

ಶುಕ್ರವಾರ, ಮೇ 6, 2011

ನೀರು ನಿಲುದಾಣ

'ನೀರೆ' ನಿಲುದಾಣ

ಮಾತಿಲ್ಲದ ಕಥೆ,

ಜಗದ ವ್ಯಥೆ.
ಮೌನದ ಜೊತೆ,
ಸಂಗೀತದ ಲತೆ.
ಬೆಳಕೂ ಮೆರೆಯಿತೇ,
ಜನರಲ್ಲಿರದ ನೀರವತೆ.
ಇದು ಇಂದಿನ ಕೊರತೆ.



ಟ್ರಿನ್ ............ಅಂತ ಶಬ್ದ ಮೊಳಗಿತು.    ನಮ್ಮೂರ ಟೆಂಟ್ ಪರದೆ ಮೇಲೆ ಸಿನಿಮಾ ಶುರುವಾಗ್ತಿದ್ದಂತೆಯೇ,  ಪ್ರಶಾಂತ ಪ್ರಕೃತಿಯನು ಸೀಳಿದ ಭಾವದೊಲುಮೆಗಳ ಮೇಲಾಟ. ಸದ್ದುಸುರುತ್ತಾ ಸದಾ ಹರಿವ ನೀರೇ ಹೀರೋ, ಹೀರೋಯಿನ್ ಎಲ್ಲಾನೀರಿನ ಸುತ್ತ ನೀರೆನೀರೆ ಹಿಂದೆ ನೀರವಮೌನ. ಮೌನದಲ್ಲಿ ಕಾಮಿಸುವ ಮನಸು. ಮರ್ಕಟ ಮನಸಿಗೆ ಮರುಗುವ ಜನ. ಜನರಿಂದೆ ಜನ. ಒಬ್ಬೊಬ್ಬರು ಒಂದು ತಲೆಮಾರು. 

ಅವಳೊಬ್ಬಳು. ಅದು ಬಯಲುದಾರಿಯಲ್ಲಿ ಬಸವಳಿದ ಜೀವ. ನಲ್ಲಿ ಕಂಡೊಡನೆ ಕುಳಿತಳಲ್ಲಿ. ಲೋಟದ ನೋಟಕೆ ದಾಹತಣಿಯಿತು. ಹೆಜ್ಜೆ ಅರಸಿದವು. ಅವನೊಬ್ಬ ಯಾತ್ರಿ, ದಾಹ ತಣಿಸಿಕೊಂಡು, ಕಡೆಗೆ ನೀರಿನ ಬುಡಕ್ಕೆ ಬಾಯಿಟ್ಟ. ನೀರಿದ್ದಲ್ಲಿ ನಿಂತವು ಪ್ರಾಣಿಗಳು. ಹದಿಹರೆಯಕೆ ಹರಕೆಯಂತಿದ್ದ ನವರಸಶ್ರೇಷ್ಠ ಶೃಂಗಾರದಲಿ ರಮಿಸಿದವು. ಬಟಾಬಯಲಲ್ಲಿ ಬೆತ್ತಲಾದದ್ದ ಕಂಡು, ನೋವನುಂಡು, ನಿರ್ಗಮಿಸಿದವು.

  ಮೂಲೆಯಲ್ಲಿ ತಿರುತಿರುಗಿ ಮಲಗಿ, ರವಿಯೊಡನೆ ರಸಗಳಿಗೆ ಅನುಭವಿಸಿ ಜೀವಂತ ಕಾಣುವ ಜೀವಿ. ಜಗದಾಗು ಹೋಗುಗಳ ವೀಕ್ಷಕ. ಕಣ್ಣಲ್ಲಿ ಕಂಡದ್ದು ಮುದುಕಿ. ಮಟಮಟ ಮಧ್ಯಾಹ್ನ. ಬಾಯಾರಿಕೆ. ನೀರಿನ ಕನವರಿಕೆ. ಗಂಟಲೊಳಗೆ ನೀರಿಳಿಯಿತು. ಜೀವ ಧರೆಗುರುಳಿತು. ಹಿಂದಿಂದ ಬಂದಿಬ್ಬರು ಸಾವೆಂದು ಸಾಗಿಸುತ ಮುನ್ನಡೆದರು.

 ವೇದಿಕೆಯಲಿ ನಡೆದ ನಾಟಕಕ್ಕೆಸುತ್ತ ಕತ್ತಲ ಪರದೆ. ಬಲಕೆ ಗುಡ್ಡ. ಎಡಕೆ ಗೋಡೆ. ಹಿಂಭಾಗವೊಂದು ಬೆಳ್ಳಿಪರದೆಪಕ್ಕ ಕಾಲುಹಾದಿ. ಮೇಲೆಲ್ಲಾ ಬೆಳಕಿಂಡಿಗಳು. ಆ ಬೆಳಕುಭಾವಕ್ಕೆ ಬಂಧು. ವೇದಿಕೆ ಮಧ್ಯೆ "ನಲ್ಲಿ" ಯು ಒಂದು. ನಲ್ಲಿಯೇ ನಾಟಕದ ಕೇಂದ್ರಬಿಂದು. ಒಂದೇ ನಿಲುದಾಣ, ಹಲವರ ಬದುಕಿನ-ಹಲವು ನಿಲುಗಡೆಗೆ ನಾಂದಿ ಹಾಡಿತುಬಸವಜಯಂತಿಯಂದು. ನಿನಾಸಂ ಮರುತಿರುಗಾಟದಲಿ ಪ್ರದರ್ಶನಗೊಂಡ ನಾಟಕ, ಜಂಗಮವಾಣಿಗಳ ಕಿರಿಕಿರಿ, ನೀರೆಯರ ಮಾತಿ ಝರಿಯ ನಡುwayಯೂ, way ಇಲ್ಲದೇ ಸಹೃದಯರ ಸೂರೆಗೊಂಡಿತು.

ಸೋಮವಾರ, ಮೇ 2, 2011

ನನ್ನೊಲವಿಗೆ

ನಾ ಚಿಗುರಾಗುವೆ
ಎನ್ನೊಳಗೆ ಲೀನವಾಗುವ
ಮುಂಜಾವದ ಮಂಜು
ನೀನಾಗಿ ಬರುವೆಯೆಂದು...

ನಾ ಹೂವಾಗುವೆ
ಈ ಪ್ರೀತಿ ಮಧುವ
ಹೀರ ಬರುವ ತುಂಬಿ
ನೀನಾಗಿ ಬರುವೆಯೆಂದು...
.
ನಾ ಹಣ್ಣಾಗುವೆ
ಈ ರುಚಿಯ ಸವಿಯ ಬರುವ
ಹೆಣ್ಣು ಗಿಳಿ
ನೀನಾಗಿ ಬರುವೆಯೆಂದು...

ನಾ ಮರವಾಗುವೆ
ಎನ್ನಪ್ಪಿ ಬೆಳೆವ
ಲಲಿತ ಲತೆ
ನೀನಾಗಿ ಬರುವೆಯೆಂದು...

ನಾ ಮರದ ಕೊಳಲಾಗುವೆ
ಒಳಗಣ್ಣಿನಿಂದುಸುರಿ ಬರುವ
ಸ್ವರ ನಿನಾದವಾಗಿ
ನೀ ಕಾಣ ಬರುವೆಯೆಂದು....

ನಾ ನಿರುಳ ಶಶಿಯಾಗುವೆ
ನೀ ನಭದಿ ಮಿನುಗುವ
ಧೃವತಾರೆಯಾಗಿ
ಕಾಣಬರುವೆಯೆಂದು.....

ನಾ ನಾನಾಗುವೆ
ನೀ ನೀನಾಗಿ
ಎನ್ನೆದೆಬಡಿತದ ತಾಳವಾಗಿ
ಇರುವೆಯೆಂದು..ಎಂದೆಂದೂ....