22-07-2010
ರಿಂದ
22-07-2020.
ಹತ್ತು ವರ್ಷ. ಹೇಗೆ ಕಳೆಯಿತು ? ಗೊತ್ತಿಲ್ಲ..! ಒಪ್ಪಿ ಬಂದೆ. ಅಪ್ಪಿ ಬಂದೆ. ಅಷ್ಟೇ ! ಬಂದ ದಿನದಿಂದ ಖುಷಿ ಇದೆ. ಬೆಟ್ಟದಷ್ಟು ! ಒಂಥರಾ ಬೇಸರವಿದೆ. ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಎಂಬ ಭಾವ. ಸದಾ ನೇರಾ ನೇರ. ಬಿಟ್ಟರೆ ಅಡ್ಡದಾರಿ ಅರಿವಿರಲಿಲ್ಲ. ಪ್ರಯಾಣದಲ್ಲೂ. ಕೇರ್ ತೆಗೆದುಕೊಳ್ಳುವ ಕೆ.ಆರ್.ನಗರದಿಂದ ರಾವಂದೂರಿಗೆ ದಾರಿ ಸವೆಸಿದೆ.
ಮೂರು ವರುಷ ಹರುಷದಿಂದಲೇ ಕಳೆದೆ. ಹಿಂದೆಂದೂ ಶಾಲೆ ಅನುಭವ ಇರಲಿಲ್ಲ ; ಬಿ.ಎಡ್ ಬಿಟ್ರೆ. ದೊಡ್ಡ ಶಾಲೆ. ಸಣ್ಣ ಸಣ್ಣ ಕೆಲಸಗಳು. ಖುಷಿ ಕೊಟ್ಟವು. ಶಾಲೆಯಲ್ಲೇ ಬಿಸಿ ಊಟ ಬಡಿಸಿದ್ದು, ಅದಕ್ಕಾಗಿ ಮನೆ ಮನೆ ಸಿಲಿಂಡರ್ ತಂದಿದ್ದು, ರಾಜ್ಯ ಹಂತದಲ್ಲಿ ಗಝಲ್ ಮೊಳಗಿಸಿದ್ದು, ಆಕಾಶವಾಣಿಯಲ್ಲಿ ನಮ್ಮದೇ ದನಿ ಆಲಿಸಿದ್ದು, ಪ್ಯಾಕೆಟ್ ಕ್ಯಾಲೆಂಡರ್ “ತಿಂಗಳ ತೇರು”, ವಾರ್ಷಿಕ ಸಂಚಿಕೆ “ಪ್ರೌಢಪ್ರಭೆ”, ವಾರ್ಷಿಕೋತ್ಸವ, ವಜ್ರಮಹೋತ್ಸವ, ಹೀಗೆ ಸಾಗಿದ ಪರಿ ಅಚ್ಚರಿ.
ಮಕ್ಕಳ ಮನದಲ್ಲಂತು ನಾ ಹೀರೋ. ಅದೇ ಹೆಮ್ಮೆ. ಬೆಂಗಳೂರಿನ ರೈಲ್ವೇ ಸ್ಟೇಶನ್ ನಲ್ಲಿ ಕೂಗಿ ಕರೆದು ಮಾತನಾಡಿಸಿ ಸಿಕ್ಕವ..ಮೊನ್ನೆ ಮೊನ್ನೆ "ಐ ಲವ್ ಯೂ ಸರ್ " ಎಂದವ, ವಾಟ್ಸೊಪ್ಪಿನಲ್ಲಿ ಬಂದು ಹೋಗೊ ಸಂದೇಶಗಳು, ಆಗಿಂದಾಗ್ಗೆ ಕುಶಲೋಪರಿ ವಿಚಾರಿಸುವ ಶಿಷ್ಯ ಬಳಗವೇ ನನ್ನ ಆಸ್ತಿ. ನನ್ನ ಬಿರುದು. ನನಗೆ ಸನ್ಮಾನ.
ಇನ್ನೂ ನನ್ನ ಶಾಲೆ. ಹನ್ನೆರಡು ಎಕರೆ ಅಂಗಳ. ಅಲ್ಲಿ ಕೈಗೂಡಬೇಕಿದ್ದ
ಕಾರ್ಯಗಳು. ಕಂಡ ಕನಸುಗಳು. ಭ್ರಮೆಯಲ್ಲಿ ಅರಳಿದ ಹೂ ಗಳು ಅರಳುವ ಮುನ್ನವೇ ಬಾಡಿ ಹೋದದ್ದು
ವಿಪರ್ಯಾಸ. ಹಾಗೆ ನನ್ನ ಎಸ್.ಡಿ.ಎಂ.ಸಿ..! ಜೀವನದಲ್ಲಿ ಮರೆಯಲಾದೀತೆ ? ಎಲ್ಲಾ ಸುಕೃತ. ಆ ಯಶೋಗಾಥೆ ಗಳದ್ದೇ ಒಂದು ಸರಣಿ ಬರೆಯಬೇಕು.
ದಿಢೀರ್ ಬೆಳವಣಿಗೆ ಆಗಿದ್ದೇ ಬಂತು. ದುಡುಕಿ ಬಿಟ್ಟೆ. ದುಡುಕಿದೆ ಅಂತ ಅರಿವಾಗಿದ್ದೆ ತಡವಾಗಿ. ಶಾಲೆ ಬಿಟ್ಟು ಮಹಲ್ ಸೇರಿದೆ. ಊರಿನವರು ಹುಡುಕಿ ಬಂದರು. ಮತ್ತೆ ಬನ್ನಿ ಎಂದರು. ಬರುವೆನೆಂದೆ. ಹಸಿ ಸುಳ್ಳಾಡಿದೆ. ಇದಕ್ಕೂ ವಿಷಾದವಿದೆ.
ಇನ್ನು ನನ್ನ ವಸಂತಯಾನಕ್ಕೀಗ ಏಳು ವಸಂತ..! ಇದು ಗೊತ್ತಾಗಲು ಮತ್ಯಾರೋ ಎಚ್ಚರಿಸಬೇಕಾಯಿತು ನೋಡಿ !. ನನ್ನ ಪಾಡೆನಗೆ ನನ್ನ ಹಾಡೆನಗೆ ಎಂತಿದ್ದವನು ಎಚ್ಚರಗೊಂಡಿದ್ದೇನೆ.
ಜಿಲ್ಲೆಯಲ್ಲಿ ಉಪನ್ಯಾಸಕ ಸ್ಥಾನ. ಜೊತೆಗೆ ನೊಡಲ್ ಬಿರುದು. ಮೂರು ತಾಲೂಕಿಗೆ ಈ ನೋಬೆಲ್ ಸಿಕ್ಕಿದೆ. ಆದರೆ ಎಲ್ಲೂ ಹೇಳಿಕೊಳ್ಳುವಂತದ್ದು ಮಾಡಲಾಗಿಲ್ಲ. ಪುಕ್ಸಟ್ಟೆ ಮಾತಾಡಿದ್ದೇನೆ. ಕೆಲವರ ಇಷ್ಟಕ್ಕೆ. ಮತ್ತಲವರ ಕಷ್ಟಕ್ಕೆ.
ತಂತ್ರಜ್ಞಾನ ಮೆಟ್ಟಿಲು ತುಳಿದೆ. ಹತ್ತಲಾಗದ ಪಥ. ಆದರೂ ಹತ್ತಬೇಕೆಂಬ ಶಪಥ. E ದಾರಿಯಲ್ಲಿ ದೂರಿ ದೂರಿ ದುಮ್ಮಕ ದೂರಿ. ಹತ್ತಲಿಲ್ಲ ಇಳಿಯಲಿಲ್ಲ. ಬೈದು ಕೊಂಡವರಷ್ಟು, ಬಂಧು ಎಂದವರಿಷ್ಟು, ಮಾತು ಕೃತಿ ಒಂದಾಗದ ಜ್ಞಾನ. ಐಟಿ-ಐಟಿ ಇದು High ಟೀ ಏರಿಯಾ. E ಬೆಳೆ ನಮ್ಮೂರಿನ ಮುಳುಗಡೆಯ ಬೆಳೆಯಂತೆ..!! ಸಿಕ್ಕಷ್ಟು ಸೀರುಂಡೆ.
ಹೀಗೆ ಮಾತು ಮಾತನಾಡುತ್ತಲೇ ರಾಜಧಾನಿಗೂ ರಾಜದನಿ ಮುಟ್ಟಿದೆ ಎಂದರೆ ಅತಿಶಯವಲ್ಲ. ಸಂಪನ್ಮೂಲ ವ್ಯಕ್ತಿಯಾಗಿ, ಜಿಲ್ಲೆ , ರಾಜ್ಯ ಕಚೇರಿ ತುಳಿದಿರುವೆ. ಇರುವೆಯಂತೆ ರುಚಿಸಿದ್ದನ್ನ ಗೂಡಿಗಿಳಿಸಿರುವೆ. ಬೆಚ್ಚನೆ ಭಾವದಲ್ಲಿ.
ಅತ್ತ ಸುತ್ತುತ್ತಲೇ ಸಂಘದ ಗೀಳು ಹತ್ತಿತ್ತು. ರಾಜ್ಯ ಸಂಘ ಪುನರುಜ್ಜೀವನಗೊಂಡಿತು. ಸಂಘಮೇವಜಯತೇ ಎಂಬ ಘೋಷ ಮೋಳಗಿತು. ಮಾನ್ಯತೆ ದಕ್ಕಿತು. ಅನಿಸಿದಷ್ಟು ಬಲವಿಲ್ಲದೆಯೂ ನಾ ರಾಜ್ಯ ಘಟಕದ ಮಾಧ್ಯಮ ಕಾರ್ಯದರ್ಶಿ. ಎಲ್ಲರೂ ತೆಗಳುವ ಸಂಘದ ತೆವಳುವ, ತೆವಳಿಸುವ ಸದಸ್ಯ ನಾ. ಮೈಸೂರೆಂಬ ಘಟಕಕ್ಕೆ ಪ್ರಧಾನಿ ಕಾರ್ಯದರ್ಶಿ.
ಇನ್ನು ನಮ್ಮ ಶಿಕ್ಷಕರ ಬಳಗ. ಕೊಳಗ ಕೊಳಗದಷ್ಟು ಬಳಗ. "ನಿಮ್ಮಂತೆ ಯಾರೂ ಗೈಡ್ ಮಾಡಿರಲಿಲ್ಲ ಸಾರ್. ವಾರ ಬಿಟ್ಟು ಬನ್ನಿ ಸಾರ್. ನೋಡಿ" ಎಂಬುವವರು, ಹಿಂದೆ ತೆಗಳುವವರು, ಮುಂದೆ ಹೊಗಳಿ ಊಳಿಡುವವರು, ಇವನ್ಯಾವೂರು ಎಂದವರು ?, ಯಾವ ಕ್ಯಾಸ್ಟು ಅಂದವರು? ಏನೂ ಕೇಳದೆ ಹತ್ತಿರವಾದವರು, ಹತ್ತಿರವಿದ್ದೇ ದೂರಾದವರು, ಕೃತಿಯಲ್ಲೇ ಕಲಿಸಿದವರು, ಕಲಿತು ಕಳಿತು ಬೆಳೆಸಿದವರು, ದಣಿಯದೆ ದುಡಿಯುವವರು, ಮಕ್ಕಳೆಮಗೆ ದೈವ ಎಂದವರು, ಬೇಸರದಲೂ ಸ್ಫೂರ್ತಿ ತುಂಬಿದವರು, ನೇಸರದಿ ನೆನಪು ತಂದವರು ಶಿಕ್ಷಕರೇ.
ಕಾಲವಲ್ಲದ ಕಾಲದಲ್ಲಿ ಸಂಭ್ರಮಕ್ಕೊಂದು ನೆಪ. ನನ್ನಂತೆ ಸಡಗರಿಸುವ ಸಂಗಡಿಗರು ನೂರಾರು ಮಂದಿ. ಅವರೆಲ್ಲರದ್ದೂ ಇದೆ ಭಾವ. ಈ ಜೀವಗಳ ಜೀವಂತಿಕೆಗೂ ಇದೆ ತಾವಾ.? ಆದರೆ ದಶಕದ ಪುಳಕವೇನಿಲ್ಲ. ಹತ್ತು ವರ್ಷ ಎಂಬ ಸಂಭ್ರಮೆಗೂ ಸಂಕಟವಿದೆ. ಅನಿಸಿದ್ದು, ಕನಸಿದ್ದು, ಮುನಿಸಿದ್ದು, ಭ್ರಮಿಸಿದ್ದು, ಶ್ರಮಿಸಿದ್ದು, ಸಾರ್ಥಕವೋ..ಸ್ವಾರ್ಥಕ್ಯವೋ ತಿಳಿಯದು. ನಡೆದಿದೆ ಪಯಣ. ಪ್ರಶಾಂತಯಾನ.
ಈ ವಸಂತಯಾನದಲಿ. ನೆನಪಿರಲಿ. ನೆನಪಿನ ಹಂಗಿರಲಿ. ಹಾರೈಕೆ ಹೆಂಗೂ ಇರಲಿ. ಇರಲಿ ಈ ಅಂಟಿದ ನಂಟು. ನೆಮ್ಮದಿಯ ನಾಳೆ ನಮಗೂ ಉಂಟು. ಹಾರೈಕೆ ಇರಲಿ. ಹೃದಯತುಂಬಿ.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ